ರಷ್ಯನ್ ಸಾಹಿತ್ಯ ವಿಮರ್ಶೆ
ರಷ್ಯದಲ್ಲಿ ಗಣನೀಯ ಸಾಹಿತ್ಯದ ಸೃಷ್ಟಿಯಾದುದೇ ಹತ್ತೊಂಬತ್ತನೆಯ ಶತಮಾನದಲ್ಲಿ. ಆದುದರಿಂದ ಸಾಹಿತ್ಯದ ವೈಚಾರಿಕ ಅಭ್ಯಾಸವನ್ನು ರಷ್ಯದಲ್ಲಿ ನಾವು ಕಾಣುವುದು ಬಹು ತಡವಾಗಿ. ಟ್ರೆಡಿಯಾಕವ್‍ಸ್ಕಿ (1703 - 69) ಬರೆದ ಕಾವ್ಯ ಮತ್ತು ಪದ್ಯಗಳ ಮೂಲದ ದೃಷ್ಟಿ (17520 ಮೊದಲನೆಯ ಗಮನಾರ್ಹಕೃತಿ. ಪ್ರಾಚೀನ ಸಾಹಿತ್ಯದ ಅನುಕರಣೆಯ ಸಮರ್ಥನೆ ಇದು. ಇದೇ ಯುಗದ ಲಮನಸೋವ್‍ನಲ್ಲಿ ಅಸಾಧಾರಣ ದೇಶಪ್ರೇಮವಿತ್ತು. ಇವನು ಸಾಹಿತ್ಯದ ಭಾಷೆ ಮತ್ತು ಛಂದಸ್ಸುಗಳಲ್ಲಿ ಮಾನಗಳನ್ನು (ಸ್ಟ್ಯಾಂಡರ್ಡ್) ಸ್ಥಾಪಿಸಲೆತ್ನಿಸಿದ. ಇಂದಿಗೂ ಇವನ ಪ್ರಭಾವ ರಷ್ಯದ ಸಾಹಿತ್ಯದ ಭಾಷೆಯಲ್ಲಿ ಕಾಣುತ್ತದೆ. ಇವನ ಕಾರ್ಯವನ್ನು ಸು. 1791 ರಲ್ಲಿ ನಿಕೊಲೆ ಖರಮಜಿನ್ (1765 - 1826) ಎಂಬುವವನು ಭಾಷೆಯಲ್ಲಿ `ಚರ್ಚ್‍ಸ್ಲಾವಿಕ್ ಅಂಶವನ್ನು ಕಡಿಮೆಮಾಡಿ ಫ್ರೆಂಚ್ ಪದಗಳ ಬಳಕೆಯನ್ನು ಹೆಚ್ಚಿಸುವ ಚಳವಳಿಯನ್ನು ಪ್ರಾರಂಭಿಸಿದ. ಈತ ಮತ್ತು ಇವನ ಪಂಥದವರು ರೂಸೊನ `ಹೊಸಸಂವೇದನೆ ಯ ಮತ್ತು ರೊಮ್ಯಾಂಟಿಕ್ ಪುನಶ್ಚೇತನದ (ರಿವೈವಲ್) ಪ್ರಥಮ ಪ್ರತಿಪಾದಕರಾಗಿದ್ದರು. ರಷ್ಯದ ಮೊದಲನೆಯ ಹಿರಿಯ ವಿಮರ್ಶಕ ಬೆಲೆನ್‍ಸ್ಕಿ. ಸಾಹಿತ್ಯ ಸಮಾಜವನ್ನು ಆಶ್ರಯಿಸಿ ಮಹತ್ತ್ವಪೂರ್ಣವಾದ ಭಾವನೆಗಳಿಂದ ಪ್ರೇರಿತವಾಗಬೇಕೆಂಬುದು ಇವನ ವಾದ. ಇವನು ಸ್ಲಾವೊಫಿಲಿಸಮ್ ಅನ್ನು ವಿರೋಧಿಸಿದ. ಬೆಲೆನ್‍ಸ್ಕಿಯ ಅಭಿಪ್ರಾಯಗಳು ರಷ್ಯನ್ ಸಾಹಿತ್ಯವನ್ನು ಏಳೆಂಟು ದಶಕಗಳ ಕಾಲ ಪ್ರಭಾವಿಸಿದವು. ಈ ಪ್ರಭಾವದಿಂದ ಸಾಹಿತ್ಯದಲ್ಲಿಯ ಭಾವನೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ದೊರೆತು ರೂಪ ಮತ್ತು ತಂತ್ರಗಳಿಗೆ ತಕ್ಕಷ್ಟು ಪ್ರಾಧಾನ್ಯ ದೊರೆಯದೆ ಹೋಯಿತು. ಇಪ್ಪತ್ತನೆಯ ಶತಮಾನದ ಮಾಕ್ರ್ಸಿಸ್ಟರೂ ಬೆಲೆನ್‍ಸ್ಕಿಯ ವಿಚಾರಗಳಿಗೆ ಮನ್ನಣೆ ನೀಡುತ್ತಾರೆ. ಬೆಲೆನ್‍ಸ್ಕಿ ಮತ್ತು ಇವನ ಪಂಥದವರು `ಪ್ರಾಯೋಗಿಕ ವಾಸ್ತವಿಕತೆ ಯನ್ನು ಪ್ರತಿಪಾದಿಸಿದರು. ರಾಷ್ಟ್ರದ ಆವಶ್ಯಕತೆಯನ್ನು ಆಧಾರವಾಗಿಟ್ಟುಕೊಂಡು ಸಮಾಜದ ಬೆಳವಣಿಗೆಯ ಆವಶ್ಯಕತೆಗಳನ್ನು ಅರಿತು ರಾಷ್ಟ್ರದ ಚೇತನಕ್ಕೆ ರೂಪವೀಯಬಲ್ಲ ಸಾಹಿತ್ಯವೇ ಹಿರಿಯ ಸಾಹಿತ್ಯ ಎಂದು ಇವರು ವಾದಿಸಿದರು. ಈ ಪಂಥದ ಗ್ರೀಗೊರಿಪ್ ಎಂಬಾತ ಸಾಹಿತ್ಯ ನೆಲದಿಂದ ಉದ್ಭವಿಸಬೇಕೆಂಬ ವಾದವನ್ನು ಪರಿಣಾಮಕಾರಿಯಾಗಿ ಮಂಡಿಸಿದ.

	19 ನೆಯ ಶತಮಾನದ ಉತ್ತರಾರ್ಧದಲ್ಲಿ ರಷ್ಯನ್ ಸಾಹಿತ್ಯ ವಿಮರ್ಶೆಯ ಮಹಾಪುರುಷ ಲಿಯೊಟಾಲ್ಸ್‍ಟಾಯ್‍ನ ಆತ್ಮವೃತ್ತ (1878) ಮತ್ತು ಕಲೆ ಎಂದರೇನು (1898). ಎಂಬ ಗ್ರಂಥಗಳು ಯೂರೋಪಿನಲ್ಲೆಲ್ಲ ಅಸಾಧಾರಣ ಪ್ರಭಾವವನ್ನು ಬೀರಿದವು. ರಸೋದಯ ಸಿದ್ಧಾಂತದ (ಇಮೋಟವ್ ಥಿಯರಿ) ಸಂಪ್ರದಾಯದಲ್ಲಿದ್ದ ರೂ ಟಾಲ್ಸ್ ಟೌಯ್‍ನ ವಾದ ಸೌಂದರ್ಯೋಪಾಸನೆಗೆ ವಿರುದ್ಧವಾದುದು. ಕಲೆ ಶ್ರೇಯಸ್ಕರ ಎಂಬ ಭಾವನೆಯನ್ನು ಬದಲಿಸಿ ಸೋಂಕಿಸುತ್ತದೆ (ಇನ್‍ಫೆಕ್ಷನ್) ಎಂಬ ಭಾವನೆಯನ್ನು ಸಾಧಿಸಿದವನು ಟಾಲ್ಸ್‍ಟಾಯ್. ಕಲೆ ಯಾವಾಗಲೂ ಪ್ರಾಮಾಣಿಕವೂ ನೂತನವೂ ಆದ ಧಾರ್ಮಿಕ ಭಾವನೆಯನ್ನು ಸೋಂಕಿಸುತ್ತದೆ ಎಂದು ಆತ ಘೋಷಿಸಿದ. ಅಹಂಭಾವ, ಕಾಮ, ಜೀವನದಲ್ಲಿ ನಿರುತ್ಸಾಹ ಇಂತಹ ಭಾವನೆಗಳನ್ನು ನಿರೂಪಿಸುವ ಕಲೆಯನ್ನು ಅಲ್ಲಗಳೆದ. ಟಾಲ್ಸ್‍ಟಾಯ್‍ನ ನಿಷ್ಠುರ ಮಾನದಂಡ ಷೇಕ್‍ಸ್ಪಿಯರ್, ಮಿಲ್ಟನ್, ಗಯಟೆ, ರ್ಯಾಫೆಯಿಲ್ ಮತ್ತು ಟಾಲ್ಸ್‍ಟಾಯ್‍ಗೂ ಹಿಂದಿನ ಕಾದಂಬರಿಗಳನ್ನೆಲ್ಲ ಕಲಾ ಪ್ರಪಂಚದಿಂದ ಹೊರದೂಡುತ್ತದೆ. ಈ ಕಾಲದ ಮತ್ತೊಬ್ಬ ಪ್ರತಿಭಾವಂತ ವಿಮರ್ಶಕ ಲಿಯನ್ ಟೇಪ್ (1831 - 91). ಸಾಹಿತ್ಯ ಬಾಳಿನ ಸೌಂದರ್ಯವನ್ನೂ ವೈವಿಧ್ಯವನ್ನೂ ಪ್ರತಿಬಿಂಬಿಸಬೇಕೆಂಬುದು ಇವನ ವಾದ. ಟಾಲ್ಸ್‍ಟಾಯ್ ಕಾದಂಬರಿಗಳನ್ನು ಅಧ್ಯಯನ ಮಾಡಿ ಇವನು ಬರೆದ ಕೃತಿ ರಷ್ಯದ ಸಾಹಿತ್ಯ ವಿಮರ್ಶೆಯ ಮಹಾ ಗ್ರಂಥದಲ್ಲಿ ಒಂದು. 19 ನೆಯ ಶತಮಾನದ ಎಂಟನೆಯ ದಶಕದಿಂದ ಪ್ರಯೋಜನತಾ ಪ್ರಾಧಾನ್ಯವಾದದ ವಿರುದ್ಧ ಪ್ರತಿಕ್ರಿಯೆ ಪ್ರಾರಂಭವಾದ ಸಾಹಿತ್ಯದಲ್ಲಿ ಸೌಂದರ್ಯದ ದರ್ಶನವಾಗಬೇಕೆಂಬ ದೃಷ್ಟಿಬೆಳೆಯಿತು. ಇದು `ಕಲೆಗಾಗಿ ಕಲೆ ಎನ್ನುವಷ್ಟು ದೂರ ಹೋಗದಿದ್ದರೂ ಸಾಹಿತ್ಯದ ಕಣ್ಣು ಸಮಕಾಲೀನ ಸಮಸ್ಯೆಗಳಿಂದ ಬಾಳಿನ ನಿರಂತರ ಮೌಲ್ಯಗಳ ಮತ್ತು ಸಮಸ್ಯೆಗಳತ್ತ ಹೊರಳಿತು.  1905 ರ ಕ್ರಾಂತಿ ವಿಫಲವಾದರೂ ದೇಶದಲ್ಲಿ ಹೊಗೆಯಾಡುತ್ತಿದ್ದ ಶಕ್ತಿಗಳ ಸಾಮಥ್ರ್ಯವನ್ನು ತೋರಿಸಿಕೊಟ್ಟಿತು. ಅಲ್ಲಿಂದಾಚೆಗೆ ರಷ್ಯದಲ್ಲಿ ಮಾಕ್ರ್ಸ್‍ನ ಪ್ರಭಾವ ಸಾಹಿತ್ಯ ಪ್ರಪಂಚದಲ್ಲಿಯೂ ಬೆಳೆಯತೊಡಗಿತು. ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಳು ಸಾಹಿತ್ಯ ವಿಮರ್ಶೆಯ ಮೇಲೂ ಪ್ರಭಾವ ಬೀರಿದವು. ಇಲ್ಲಿಂದ ಸೋವಿಯೆತ್ ಶಕ್ತಿಗಳು ಬೆಳೆಯತೊಡಗಿ 1917 ರ ಕ್ರಾಂತಿಯ ಅನಂತರ ಸೋವಿಯತ್ ಸಾಹಿತ್ಯ ವಿಪುಲವಾಯಿತು. ಗಾರ್ಕಿಯಂಥ ಬರೆಹಗಾರರು ಸೋವಿಯೆತ್ ಪೂರ್ವದ ಸಾಹಿತ್ಯ ಮತ್ತು ಸೋವಿಯೆತ್ ಸಾಹಿತ್ಯಗಳ ನಡುವಿನ ಸೇತುವೆಯಾದರು.									
(ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ